ನೆಕ್ರಾಸಫ್, ನಿಕಲಾಯ್ ಅಲೆಕ್ಸಿವಿಚ್

	1821-1868. ಪ್ರಸಿದ್ದ ರಷ್ಯನ್ ಕವಿಗಳಲ್ಲಿ ಒಬ್ಬ. ಹುಟ್ಟಿದ್ದು ಉಕ್ರೇನ್ ರಾಜ್ಯದ ವಿನಿತ್ಸಿಗೆ ಹತ್ತಿರವಿದ್ದ ಹಳ್ಳಿ ನೆಮಿರೋಫ್‍ನಲ್ಲಿ. ಆ ಊರಿನಲ್ಲಿ ಬೀಡುಬಿಟ್ಟಿದ್ದ ಸೈನ್ಯದ ರೆಜೆಮೆಂಟಿನಲ್ಲಿ ಈತನ ತಂದೆ ಅಧಿಕಾರಿಯಾಗಿದ್ದ. ಆತ ತನ್ನ ಹುದ್ದೆಗೆ ರಾಜೀನಾಮೆ ನೀಡಿ (1824) ಯರಸ್ಲಾವ್ ಪ್ರಾಂತ್ಯದ ಗ್ರೆಪ್ನೇವೋ ಎಂಬ ಊರಿನಲ್ಲಿ ಸಂಸಾರದೊಂದಿಗೆ ಬಂದು ನೆಲೆಸಿದ.

	ವೋಲ್ಗಾ ನದಿಯ ತೀರದ ಈ ಊರಿನಲ್ಲಿ ನೇಕ್ರಾಸಫನ ಬಾಲ್ಯ ಕಳೆಯಿತು. ಶಾಲೆಯಲ್ಲಿ ಓದುತ್ತಿರುವಾಗಲೆ ಈತನಿಗೆ ಕವನಗಳನ್ನು ರಚಿಸುವತ್ತ ಒಲವಿತ್ತು. ಹಾಗಾಗಿ ತನ್ನ ಸೋದರ ಹಾಗೂ ಸ್ನೇಹಿತರನ್ನು ಕುರಿತು ವಿಡಂಬನಾತ್ಮಕ ಕವನಗಳನ್ನು ರಚಿಸಿದ. ಈತನನ್ನು ಪೀಟರ್ಸ್‍ಬರ್ಗಿಗೆ ಕಳುಹಿಸಿ ಅಲ್ಲಿ ಯುದ್ಧ ತಂತ್ರವನ್ನು ಕಲಿಸಬೇಕೆಂದು ತಂದೆಯ ಆಸೆ. ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮುಗಿಸಬೇಕೆಂದು ಮಗನ ಆಸೆ. ಹಾಗಾಗಿ ಮಗ ತಂದೆಗೆ ವಿರುದ್ಧವಾಗಿ ಸಂಸಾರವನ್ನು ತೊರೆದು, ವಿಶ್ವವಿದ್ಯಾನಿಲಯವನ್ನು ಸೇರಬಯಸಿದನಾದರೂ ಪ್ರವೇಶ ದೊರಕದೆ ಹೋಯಿತು. ಇದರಿಂದಾಗಿ ಜೀವನದ ಹೋರಾಟ ಮತ್ತಷ್ಟು ತೀವ್ರವಾಯಿತು.

	ಆದರೂ ದೈರ್ಯಗುಂದದೆ ಮಿತ್ರರ ನೆರವಿನಿಂದ ತನ್ನ ಮೊದಲ ಕವನ ಸಂಗ್ರಹಗಳ ಕಿರುಹೊತ್ತಗೆ ಮೀಚ್ತೀ ಇ ಸ್ವೂಕಿ (ಕನಸು ಮತ್ತು ಧ್ವನಿ) ಯನ್ನು ಈತ ಪ್ರಕಟಿಸಿದ. ಬೇರೆಯವರ ಅನುಕರಣವೇ ಹೆಚ್ಚಾಗಿದ್ದ ಅದು ಒಳ್ಳೆಯ ಅಭಿಪ್ರಾಯ ಗಳಿಸಲಿಲ್ಲ. ಅನಂತರ ಈತ ತನ್ನ ಸುತ್ತಲ ಕಾರ್ಮಿಕರ ದೀನದಲಿತರ ಜೀವನವನ್ನು ಕುರಿತು ಆಳವಾಗಿ ಅಧ್ಯಯನ ಮಾಡಿ ಅವರ ಬಗ್ಗೆ ಬರೆಯಲು ಉದ್ದೇಶಿಸಿದ.

	1841ರ ಸುಮಾರಿಗೆ ಮಹಾವಿಮರ್ಶಕ ಬೆಲಿನ್‍ಸ್ಕಿಯ ಪರಿಚಯ ಈತನಿಗುಂಟಾಗಿ ಸ್ವಲ್ಪ ಕಾಲದಲ್ಲೆ ಅವರ ನಡುವೆ ಗಾಢಮೈತ್ರಿ ಬೆಳೆಯಿತು. ಬೆಲಿನ್‍ಸ್ಕಿ ಈತನ ಕಷ್ಟಕಾಲದಲ್ಲಿ ಸ್ನೇಹಹಸ್ತವನ್ನು ನೀಡಿದನ್ನಲ್ಲದೆ ಈತ ಕವಿಯಾಗಲು ಸಹಾಯಮಾಡಿದ. 

	ಪತ್ರಿಕೆಯೊಂದನ್ನು ಪ್ರಕಟಿಸಿ ಆ ಮೂಲಕ ಆ ಕಾಲದ ಸಾಹಿತ್ಯವನ್ನು ಪ್ರಚುರ ಪಡಿಸಬೇಕೆಂಬ ಈತನ ಕನಸು ನನಸಾಗಲಿಲ್ಲ. ಬೆಲಿನ್‍ಸ್ಕಿ ತೀರಿಕೊಂಡದ್ದರಿಂದ (1848) ವೈಯಕ್ತಿಕವಾಗಿ ಈತನಿಗೆ ಅಪಾರ ಹಾನಿಯಾಯಿತು. ಆಮೇಲೆ ಪುಷ್ಕಿನ್ ಕಾಲದಿಂದಲೂ ಪ್ರಚಾರದಲ್ಲಿದ್ದ. ಬೆಲಿನ್‍ಸ್ಕಿ ಸಂಪಾದಕನಾಗಿದ್ದ. ಸವ್ರೆಮೆನ್ನಿಕ (ಸಮಕಾಲೀನ) ಪತ್ರಿಕೆಯ ಸಂಪಾದಕನಾದ. ತುರ್ಗೆನೆಫ್, ಗನ್ಚಾರಫ್, ಆಸ್ತ್ರೋಫ್‍ಸ್ಕಿ, ಗೆತ್ರ್ಸೆನ್ ಮೊದಲಾದ ಪ್ರಸಿದ್ಧ ಲೇಖಕರು ಈ ಪತ್ರಿಕೆಗೆ ಬರೆಯತೊಡಗಿದರು. ಲಿಯೋಟಾಲ್‍ಸ್ಟಾಯ್ ತನ್ನ ಸೆವಾಸ್ತಪೋಲಿನ ಕಥೆಗಳು ಎಂಬ ಕೃತಿಯನ್ನು ಪ್ರಕಟಿಸಿದ್ದು ಈ ಪತ್ರಿಕೆಯ ಮೂಲಕವೇ. 

	ಬಂದ ರೋಗವನ್ನು ನಿವಾರಿಸಿಕೊಳ್ಳಲು ಈತ ಇಟಲಿ ಹಾಗೂ ಫ್ರಾನ್ಸ್‍ಗಳಿಗೆ ಹೋಗಿ ಒಂದು ವರ್ಷ ಇದ್ದ (1856). ಮರುವರ್ಷ ಹಿಂತಿರುಗಿದ. 

	1860ರ ದಶಕದ ಆರಂಭ ನೆಕ್ರಾಸಫನಿಗೆ ಕಷ್ಟದ ದಿನಗಳಾಗಿದ್ದವು. 1861ರಲ್ಲಿ ಇನ್ನೊಬ್ಬ ಮಿತ್ರ ದಬ್ರಲ್ಯೂಬೋಫ್ ತೀರಿಕೊಂಡ. 1861ರಲ್ಲಿ ಜೆರ್ನಿಷೇವ್‍ಸ್ಕಿಯನ್ನು ಜಾರ್ ದೊರೆ ಸೆರೆಮನೆಗೆ ಹಾಕಿದ. ಈ ತೊಂದರೆಗಳಿಂದಾಗಿ ಎಂಟು ತಿಂಗಳ ಕಾಲ ಈತನ ಪತ್ರಿಕೆ ಪ್ರಕಟವಾಗಲಿಲ್ಲ. ಮುಂದೆ 1866ರ ಮೇ ತಿಂಗಳಲ್ಲಿ ಪತ್ರಿಕೆ ಸಂಪೂರ್ಣವಾಗಿ ನಿಂತುಹೋಯಿತು.

	ನೆಕ್ರಾಸಫನ ಕೊನೆಯ ವರ್ಷಗಳು ಅಷ್ಟೊಂದು ಚೆನ್ನಾಗಿರಲಿಲ್ಲ. ಆರೋಗ್ಯ ಸುಧಾರಣೆಗಾಗಿ ಕ್ರಿಮಿಯಾಕ್ಕೆ ಹೋಗಿ ಬಂದ. ಹೆಚ್ಚು ಕಡಿಮೆ ಎರಡು ವರ್ಷ ರುಗ್ಣಾವಸ್ಥೆಯಲ್ಲೇ ಇದ್ದ. ಶಸ್ತ್ರಚಿಕಿತ್ಸೆಯಿಂದ ಇನ್ನೂ ಹಲವು ತಿಂಗಳು ಮುಂದಕ್ಕೆ ಹೋಯಿತು, ಅಷ್ಟೆ.

	ಈತನು ರಚಿಸಿರುವ ಕಾವ್ಯ ಹಲವಾರು. ಅವುಗಳಲ್ಲಿ ಪ್ರಸಿದ್ಧವಾದವು ಮರೋಸ್, ಕ್ರಾಸ್ನಿನೋಸ್ (ಕೆಂಪು ಮೂಗಿನ ಹಿಮ); ಜೇದುಷ್ಕ ಇರೂಸ್ಕೀಯೆ ಷೆನ್ಸೀನಿ (ತಾತ ಮತ್ತು ರಷ್ಯನ್ ಹೆಂಗಸರು), ಕಮೂನ ರೂಸಿಷಿಟ್ ಹರಷೊ (ರಷ್ಯದಲ್ಲಿ ಯಾರು ಸುಖವಾಗಿರಬಲ್ಲರು), ಷಿಲೇಸ್ನಯ ದರೋಗ (ರೈಲ್ವೆ ರಸ್ತೆ).

	ಕ್ರಾಂತಿಯ ಅಲೆ ಏಳುತ್ತಿದ್ದ ಕಾಲದಲ್ಲಿ ರಚಿತವಾದ ಮರೋಸ್, ಕ್ರಾಸ್ನಿನೋಸ್ ಅತ್ಯುತ್ತಮ ಕವನಗಳಲ್ಲಿ ಒಂದಾಗಿದ್ದು ರೈತವರ್ಗದವರ ವಾಸ್ತವಿಕತೆಯನ್ನು, ಅವರ ಗುಣಸ್ವಭಾವವನ್ನು ಚಿತ್ರಿಸುತ್ತದೆ. ಇದರಲ್ಲಿ ಜನಪದ ಹಾಡುಗಳು ಲಾವಣಿಗಳು ಕಥೆಗಳೂ ಗಾದೆ ಮತ್ತು ಒಗಟುಗಳೂ ಸೇರಿವೆ.

	ಐತಿಹಾಸಿಕ ಸಂಗತಿಗಳನ್ನಾಧರಿಸಿ ರಚಿತವಾದ ಜೇದುಷ್ಕ ಇರೂಸ್ಕೀಯೆಷೆನ್ಸೀನಿ ಕವನದಲ್ಲಿ ಡಿಸೆಂಬ್ರಿಸ್ಟ್ಸ್‍ಗಳ ವೀರೋಚಿತ ಕಾರ್ಯವನ್ನು ಕುರಿತ ಉಲ್ಲೇಖವಿದೆ.

	1860-1870ರ ದಶಕದಲ್ಲಿ ರಚನೆಗೊಂಡ ಕಮೂನ ರೂಸಿಷಿಟ್ ಹರಷೊ ಮಹಾ ಕಾವ್ಯ ಸುಧಾರಣೆಗೆ ಮೊದಲು ಹಾಗೂ ಅನಂತರ ಕಾಲದ ರಷ್ಯನ್ ಜನರ ಜೀವನವನ್ನು ಚಿತ್ರಿಸುತ್ತದೆ.

	ಷಿಲೇಸ್ನಯ ದರೋಗ ಸಹ ಪ್ರಸಿದ್ಧ ಕಾವ್ಯ. ಆ ಕಾಲದ ಸರ್ಕಾರ ಜನರನ್ನು, ರೈತರನ್ನು ಶೋಷಿಸಿ ಹೇಗೆ ರೈಲ್ವೆ ರಸ್ತೆ ನಿರ್ಮಾಣ ಕಾರ್ಯವನ್ನು ಪೂರೈಸಿತು ಎಂಬುದನ್ನು ಅದು ವಿವರಿಸುತ್ತದೆ. 

	ನೆಕ್ರಾಸಫನ ಕಾವ್ಯಗುಣ ಕೇವಲ ರಷ್ಯನ್ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಉಕ್ರೇನ್, ಬೈಲೊರಷ್ಯ ಮತ್ತಿತರ ಸೋದರ ಜನತೆ ಈತನ ಕಾವ್ಯ ಪರಂಪರೆಯನ್ನು ಅನುಕರಿಸುತ್ತಿದ್ದಾರೆ. ಯಾಕೂಬ್ ಕೊಲಸ್, ಯಾಂಕೊ ಕುಪಾಲರಂಢ ಕವಿಗಳು ಈತನ ಕಾವ್ಯಸಂಪದವನ್ನು ಮುಂದುವರಿಸಿದ್ದಾರೆ.							(ಎಚ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ